ನಿಟ್ಟೂರು 1 -
	ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲ್ಲೂಕಿನಲ್ಲಿ ತುಂಗಭದ್ರಾ ನದಿಯ ದಡದ ಮೇಲಿರುವ ಒಂದು ಪ್ರಮುಖ ಐತಿಹಾಸಿಕ ಸ್ಥಳ. ಇಲ್ಲಿ ಪೂರ್ವಶಿಲಾಯುಗದಿಂದ ಅಶೋಕನ ಕಾಲದವರೆಗೆ ದಾಖಲೆಗಳು ದೊರೆತಿವೆ. ಪೂರ್ವಶಿಲಾಯುಗ ಮತ್ತು ಮಧ್ಯ ಶಿಲಾಯುಗ ಕಾಲಗಳ ಸಂಸ್ಕøತಿಗಳ ಅವಶೇಷಗಳು ಮತ್ತು ಆಯಾ ಕಾಲದ ಪ್ರಾಣಿಗಳ ಪಳೆಯುಳಿಕೆಗಳು ನದಿಯ ದಂಡೆಯ ಪದರುಗಳಲ್ಲಿ ಸಿಕ್ಕಿವೆ. ಈ ಪದರುಗಳಲ್ಲಿ 15 ಅಡಿ ಕೆಳಗೆ ಉಂಡೆ ಕಲ್ಲುಗಳ ಗಟ್ಟಿಪದರ, ಅದರ ಮೇಲೆ ಪುರಾತನ ಕಾಲದ ಕೆಂಪುಮೆಕ್ಕಲು ಮಣ್ಣಿನ ಪದರ, ಎಲ್ಲಕ್ಕೂ ಮೇಲೆ ಮೇಲ್ಮೈಪದರದಲ್ಲಿ ಈಚಿನ ಎರೆಮಣ್ಣಿನ ಪದರ ಮುಂತಾಗಿ ಹಲವು ಪದರಗಳಿವೆ. ಉಂಡೆಕಲ್ಲುಗಳ ಪದರಿನಲ್ಲಿ ಕಲ್ಲಿನ ಆಯುಧಗಳೂ ಮತ್ತು ಈಗ ನಷ್ಟವಾದ ತಳಿಗಳ ಪಳೆಯುಳಿಕೆಗಳು ಕಂಡುಬಂದಿವೆ. ಈ ಆಧಾರಗಳಿಂದ ಈ ಸಂಸ್ಕøತಿಯನ್ನು ಪ್ಲೀಸ್ಟೋಸಿನ್ ಯುಗದ್ದೆಂದು ನಿರ್ದೇಶಿಸಲು ಸಾಧ್ಯವಾಗಿದೆ. ಅಗ್ನಿಶಿಲೆಯ ಉಂಡೆಕಲ್ಲುಗಳಲ್ಲಿ ಒಂದು ಕಡೆ ಇಲ್ಲವೆ ಎರಡೂ ಕಡೆ ಚಕ್ಕೆ ತೆಗೆದು ತಯರಿಸಿದ ಮಚ್ಚುಗಳು ಹೆಚ್ಚು ಸಂಖ್ಯೆಯಲ್ಲಿ ದೊರೆತಿವೆ. ಅಗಲ ಹಾಗೂ ಹರಿತವಾದ, ಉಬ್ಬಿಕೊಂಡಿರುವ ಅಥವಾ ಕಮಾನಿನಂತೆ ಒಳಸರಿದ ಅಲಗುಳ್ಳ ಒಮ್ಮುಖ ಮಚ್ಚುಗಳು ಮತ್ತು ಆಯುಧದ ಸುತ್ತಲೂ ಅಲಗುಳ್ಳ, ಅಥವಾ ಉಬ್ಬಿಕೊಂಡಿರುವ ಅಲಗುಳ್ಳ ದ್ವಿಮುಖ ಮಚ್ಚುಗಳು ಪೂರ್ವಶಿಲಾಯುಗವನ್ನು ಸೂಚಿಸುತ್ತವೆ. ಚಕ್ಕೆ ಕಲ್ಲುಗಳಿಂದ ಸಿದ್ಧವಾದ ಆಯುಧಗಳು, ಲೆವಾಲ್ವಾವಿಧಾನದ ಮೊನೆಯುಳ್ಳ ತಿರುಗಲ್ಲುಗಳು ಮಧ್ಯಶಿಲಾಯುಗ ಸಂಸ್ಕøತಿಯನ್ನು ಸೂಚಿಸುತ್ತವೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೆಲವೆಡೆ ದೊರೆತ ಅವಶೇಷಗಳನ್ನು ಬಿಟ್ಟರೆ ವಾಯವ್ಯ ಭಾರತದ ಪೂರ್ವ ಶಿಲಾಯುಗ ಪದ್ಧತಿಯ ಅವಶೇಷಗಳು ದೊರೆತದ್ದು ನಿಟ್ಟೂರರ ಬಳಿಯಲ್ಲೆ. ಈವರೆಗೂ ಭಾರತೀಯ ಪುರಾತತ್ತ್ವಜ್ಞರು ವಾಯವ್ಯ ಭಾರತದಲ್ಲಿ ತುಂಡುಕೊಡಲಿ ಸಂಸ್ಕøತಿ ಹಾಗೂ ಉಳಿದೆಡೆಗಳಲ್ಲಿ ಕೈಗೂಡಲಿ ಸಂಸ್ಕøತಿ ಪ್ರಚಾರದಲ್ಲಿತ್ತು ಎಂಬುದಾಗಿ ಪ್ರತಿಪಾದಿಸುತ್ತಿದ್ದರು. ಈ ನೆಲೆಗಳ ಮೂಲಕ ಶಿಲಾಯುಗ ಸಂಸ್ಕøತಿ ನಿರೂಪಣೆಗೆ ಹೊಸ ಆಯಾಮ ದೊರೆತಿವೆ.

	ನಿಟ್ಟೂರ ಗ್ರಾಮದಿಂದ 0.4 ಕಿಮೀ. ದೂರದಲ್ಲಿ, ದೇವನಹಳ್ಳದ ದಡದಲ್ಲಿಯ ಶುಕ್ರದಪ್ಪ ಅಥವಾ ಚಿಕ್ಕುಡ್ದಪ್ಪ ಬೆಟ್ಟದಲ್ಲಿ ಎರಡು ಗಂಡಶಿಲೆಗಳ ಮೇಲೆ ಅಶೋಕಚಕ್ರವರ್ತಿಯ ಧರ್ಮಶಾಸನಗಳು ಉಪಲಬ್ಧವಾಗಿವೆ. ಇವು ಲಘು ಪ್ರಸ್ತರ ಶಾಸನಗಳ ಪಂಕ್ತಿಗೆ ಸೇರುತ್ತವೆ. ಅಕ್ಷರಗಳ ರೂಪಣ, ವಲನ ಸುಮಾರಾಗಿ ಬ್ರಹ್ಮಗಿರಿಯ ಶಾಸನಗಳನ್ನೇ ಹೋಲುತ್ತವೆ. ಈ ಎರಡು ಶಾಸನಗಳಲ್ಲೂ ರಾಜಾ ಅಶೋಕ ಎಂಬ ಉಲ್ಲೇಖವಿರುವುದು ತುಂಬ ಗಮನಾರ್ಹ ಸಂಗತಿ. ಇದರಿಂದ ಅಶೋಕನ ಕಾಲದಲ್ಲಿ ನಿಟ್ಟೂರು ಒಂದು ಬೌದ್ಧಕೇಂದ್ರವಾಗಿತ್ತೆಂದು ಕಂಡುಬರುತ್ತದೆ.  
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ